ಆಸ್ಟರೇಸೀ (ಕಂಪಾಸಿóಟೀ) ಕುಟುಂಬಕ್ಕೆ ಸೇರಿದ ಒಂದು ಪೊದೆ. ಪಾರ್ತೇನಿಯಮ್ ಅರ್ಜೆಂಟೇಟಮ್ ಇದರ ವೈಜ್ಞಾನಿಕ ಹೆಸರು. ಇದರಿಂದ ಕೌಚುಕ್ ಎಂಬ ಹೆಸರಿನ ವಿಶಿಷ್ಟ ಬಗೆಯ ರಬ್ಬರನ್ನು ತೆಗೆಯುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣ ಭಾಗ ಇಲ್ಲವೆ ಮೆಕ್ಸಿಕೋ ಇದರ ತವರು. ಭಾರತದಲ್ಲಿ ಪುಣೆಯ ಸುತ್ತಮುತ್ತಣ ಕಾಡುಗಳಲ್ಲಿ ಇದರ ಸಂಬಂಧಿಯಾದ ಪಾರ್ತೀನಿಯಮ್ ಹಿಸ್ಟಿರೋಫೋರಮ್ ಎಂಬ ಪ್ರಭೇದ ಬೆಳೆಯುತ್ತದೆ. ಈ ಪ್ರಭೇದ ಈಗ ಬೆಂಗಳೂರಿನಲ್ಲೆಲ್ಲ ಕಳೆಗಿಡವಾಗಿ ಬೆಳೆಯತೊಡಗಿದೆ.

ಬೇರೆ ರಬ್ಬರ್ ಮರಗಳಲ್ಲಿ  ಹಾಲ್ನೊರೆಯ ರೂಪದಲ್ಲಿ ರಬ್ಬರ್ ಒಸರಿದರೆ ಗ್ವಾಯೂಲೇಯಲ್ಲಿ ಇದು ಅಂಗಾಂಶಗಳಲ್ಲಿ ಹರಡಿದ್ದು ಗಿಡವನ್ನು ಕತ್ತರಿಸಿ ಅರೆದಾಗ ಮಾತ್ರ ಹೊರಬರುತ್ತದೆ. ಗಿಡಗಳನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿ ಅರೆದು ನೀರಿನೊಂದಿಗೆ ಬೆರೆಸುತ್ತಾರೆ. ಆಗ ಕೌಚುಕ್ ಅಂಗಾಂಶಗಳಿಂದ ಹೊರಬಂದು ನೀರಿನಲ್ಲಿ ತೇಲತೊಡಗುತ್ತದೆ. ಇದನ್ನು ಬೇರ್ಪಡಿಸಿ ಶುದ್ಧೀಕರಿಸುತ್ತಾರೆ. ಇದು ಹೀವಿಯ ಬ್ರಸಿಲಿಯೆನ್ಸಿಸ್ ಮರದಿಂದ ದೊರೆಯುವ ರಬ್ಬರಿನಷ್ಟೇ ಉತ್ತಮವಾಗಿದೆ. ಇದನ್ನು ನೇರವಾಗಿಯೇ ಬಳಸಬಹುದಾದರೂ ಕೃತಕ ರಬ್ಬರಿನೊಂದಿಗೆ ಬೆರೆಸಿ ಉಪಯೋಗಿಸುವುದೇ ವಾಡಿಕೆಯಲ್ಲಿರುವ ಕ್ರಮ. ಗ್ವಾಯೂಲೇ ಗಿಡವನ್ನು ರಬ್ಬರ್ ಮರಗಳಂತೆ ತೋಟಗಳಲ್ಲಿ ಬೆಳೆಸುವ ಮತ್ತು ಇಳುವರಿಯ ಮೊತ್ತವನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಕುರಿತು ಸ್ಪೇನ್, ಟಿರ್ಕಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸಂಶೋಧನೆ ನಡೆಯುತ್ತಿದೆ.	(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ